ಕಣ್ಮರೆಯಾದ ಘಳಿಗೆ ಗೋಚರವಾಗದು ಕಣ್ಣಿಗೆ ಮತ್ತೆಂದು…
ಕಣ್ತಪ್ಪಿಸಿ ಅವಿತಿರುವ ಮುತ್ತು ಸಿಗವುದು ಮರಳಿ ದೊರಕುವ ದಿನದಂದು…
ಹುಡುಕಲಾರೆವು ಕಳೆದ ಹೊತ್ತನ್ನು, ಸಿಗಲಾರದ ಹೊತ್ತು ಹುಡುಕಿ ಮೂರ್ಖರಾಗಲು
ವ್ಯರ್ಥವಾಗಿ ಕಳೆದಾಗಲೇ ಕಾಲವನ್ನು, ತಿಳಿಯದೇ ಆವರಿಸುವುದು ಮತಿಯಲ್ಲಿ ಮೂರ್ಖತನದ ಮಜಲು…
ಸಿಗುವ ಮುತ್ತನ್ನ ಹುಡುಕಿ ಹೊರಡುವನು ಮುತ್ತಿನಂತ ಮನುಷ್ಯ
ಮೂರ್ಖಮಾನವನ ಕಂಡು ಕಾಲ ಕಿರುನಗೆ ಬೀರುತ್ತಾ ಮಾಡಿತು ಅಪಹಾಸ್ಯ……
ಎಲೇ ಮಾನವ ನೀ ಕಳೆದುಕೊಂಡ ಮುತ್ತನ್ನು ಕೊಟ್ಟಿದ್ದೇ ನಾನೊಲಿದ ಸಮಯ
ಕಳೆದಿರುವುದನ್ನು ಹುಡುಕುತ್ತಾ ಇರುವ ನನ್ನನ್ನು ಕಳೆದುಕೊಳ್ಳುತ್ತಿರುವೆಯಾ
ನಾ ನಶಿಸುತ್ತಿರುವ ಪ್ರತಿ ಕಾಲದಲ್ಲಿ, ಆಲೋಚಿಸಿಕೋ ನಿನ್ನ ಭವಿಷ್ಯದ ವಿಷಯ
ಚಿಂತಿಸಿ ನನ್ನನ್ನು ವ್ಯಯಿಸಿ, ನಿನ್ನ ಬದುಕಿಗೆ ನೀನಾಗಬೇಡ ಮುಕ್ತಾಯ………
ನಿನ್ನೊಪ್ಪಿಗೆ ಬೇಕಿಲ್ಲಾ, ನಾ ಬರಲು ನಿನ್ನ ಜೊತೆಯಾಗಲು
ನಾನೆಂದು ಬಯಸಲಿಲ್ಲ ನಿನಗೆ, ನೀ ಕಂಡ ಕನಸು ಹುಸಿಯಾಗುತ್ತಿರಲು
ನಾ ನಿನ್ನ ಆಕ್ಷೇಪಿಸುವುದಿಲ್ಲಾ, ನಿನ್ನ ಮನಬಂದಂತೆ ನನ್ನ ಬಳಸಿಕೊಳ್ಳಲು
ಸೂತ್ರವೊಂದನ್ನು ಸೂಚಿಸುವೆನು ಮನುಜ ನಿನಗಾಗಿ, ಬದುಕಲ್ಲಿ ನೀನು ನಿನ್ನ ಬದುಕೊಂದನ್ನು ಕಟ್ಟಿಕೊಳ್ಳಲು
ನಾ ಸರಿದೋಗುವ ಮುನ್ನ ಅರಿತುಕೊಂಡು ಕಳಿಸು ನನ್ನನ್ನ, ನಿನ್ನ ನೀ ಗೆಲ್ಲಲು
ಗೌರವಿಸಿ ಸದ್ಭಳಕೆ ಮಾಡಿಕೋ ನನ್ನನ್ನು,
ತಡವಾದರೂ ಸರಿಯೇ ಕೀರ್ತಿಪತಾಕೆ ಹಿಡಿದು ಬರುವೆನು ನೀ ಜಯಶಾಲಿಯಾಗಲು………….
ನಾನಿನ್ನ ವಂಚಿಸಲಿಲ್ಲ ಮನುಜ, ನಿನ್ನ ಮೂರ್ಖತನಕ್ಕೆ ನಾನು ಸಾಕ್ಷಿಯಾದೆ
ನಾ ನಿನ್ನ ಕೆಡುಕು ಬಯಸಲಿಲ್ಲ ಮನುಜ, ನಿನ್ನ ಹಗೆತನಕ್ಕೆ ನಾ ಕರ್ಮವಾದೆ
ನಾನಿನ್ನ ಹಾದಿ ಬದಲಿಸಲಿಲ್ಲ ಮನುಜ, ನಿನ್ನ ಬದಲಾವಣೆಗೆ ನಾ ಜೊತೆನಡೆದೆ
ನಾನಿನ್ನ ಪ್ರಚೋದಿಸಲಿಲ್ಲ ಮನುಜ, ನಿನ್ನ ಉದ್ವೇಗಕ್ಕೆ ನಾ ಮೌನತಾಳಿದೆ
ನಾನಿನ್ನ ಅವಮಾನಿಸಲಿಲ್ಲ ಮನುಜ, ನೀ ಮಾಡಿದ ಕಾರ್ಯಗಳೇ ನಿನಗೆ ಅರ್ಪಿಸಿದೆ
ನಾನಿನ್ನ ಕೈ ಬಿಡಲಿಲ್ಲ ಮನುಜ, ನೀ ನಡೆದ ದಾರಿಗೆಲ್ಲ ಕಾರಣವಾಗಿ ನಾನುಳಿದೆ…….
ನನ್ನ ಜೊತೆ ನೀ ನಡೆಯಬೇಕು ಇದುವೇ ಜಗದ ನಿಯಮ
ನೀ ಮಾಡಿದ ಪಾಪ ಪುಣ್ಯವನ್ನೇ ನಿನಗೆ ಅರ್ಪಿಸಬೇಕು ಅದುವೇ ನನ್ನ ಧರ್ಮ
ಆತುರಗಾರನಾಗಬೇಡ ಮಾನವ, ಅಡಗಿದೆ ಬದುಕಲ್ಲಿ ತಾಳ್ಮೆಯೊಂದರ ಮಹತ್ತರವಾದ ಮರ್ಮ
ಪ್ರತಿಹೆಜ್ಜೆಯಲ್ಲೂ ಆಲೋಚಿಸಿ ಮುನ್ನಡೆ,
ಆಗುವುದು ನಿನ್ನೆಲ್ಲಾ ದಾರಿಗಳು ಸುಗಮ………
ಬೆಲೆ ಕಟ್ಟಲಾಗದ ಅಮೂಲ್ಯನಿಧಿ ನಾನು,ಅರಿತುಕೋ ನನ್ನ ಅನುಕ್ಷಣವನ್ನ
ಕೋಟಿಹಣದ ಸುರಿಮಳೆಗೆಯ್ದರು ಮರಳಿ ಪಡೆಯಲಾರೆ ನೀನು, ಕಳೆದುಕೊಂಡ ನನ್ನ ಒಂದೇ ಒಂದು ಕ್ಷಣ
ನೀ ಕಳೆಯುತ್ತಿರುವ ಒಂದೊಂದು ದಿನ, ಉಪಯೋಗವಾಗುವಂತಿರಲಿ ನಿನಗೆ ಮುದೊಂದಿನ
ಕ್ಷಣ ಕ್ಷಣಕ್ಕೂ ನಿನ್ನಗಲಿ ನಾ ದೂರಸರಿಯುವ ಮುನ್ನ, ನೆನಪಲ್ಲುಳಿಯುವಂತಿರಲಿ ಸರಿದ ನನ್ನ
ಆ ಪ್ರತಿಯೊಂದು ಕ್ಷಣ
ಹೇ ಮಾನವ ಸದುಪಯೋಗಪಡಿಸಿಕೋ,
ನಿನ್ನ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನ
ನಿನ್ನ ಸೌಖ್ಯ ಜೀವನಕ್ಕಾಗಿ ಇದೇ ನಿನಗೆ ನಾ ತಿಳಿಸುತ್ತಿರೋ ವರ್ತಮಾನ……..