()
ಹೇ ದೇವಾ,ನೀನೆಲ್ಲಿರುವೆ ?
ಕಲ್ಲು ಮೂರುತಿಯಲ್ಲಿಯೆ ?
ಹಾದಿ ಬೀದಿ ಯಲ್ಲೆ,
ಗುಡಿ ಗುಂಡಾರಗಳಲ್ಲೆ ?
ಯಾರು ಕಂಡವರು ನಿನ್ನ,
ಸಾಕಾರ ರೂಪ ?
ಆ ಮಹಾ ಶಕ್ತಿ ಯನ್ನೆ ತುಂಡರಿಸಿ,
ಮತಾಂಧತೆ, ಮೂಢನಂಬಿಕೆಗಳ ಸುತ್ತ , ಸುಳಿದಾಡುವಾಗ
ಎಂತು ಅರಿವುದು ನಿನ್ನ ?
ಹೇ ದೇವಾ ನೀನೆಲ್ಲಿರುವೆ ?
ಅರಿವು ಬರಲೆಂದೆ ಸಾಕಾರ ರೂಪ ಸ್ರಿಷ್ಟಿ
. ಅರಿವು ಮರೆಯಾಗಿದೆ ಇಂದಿನ ದೃಷ್ಟಿ
ನೀನಿರದ ಸತ್ಯ ಶುದ್ಧ ಮೂರುತೀ .
ಬರಿ ಆಡಂಬರದ ಕೀರುತೀ .
ಭಕ್ತಿ ಭಾವ ಕರಗದೇ
ಅರಿವುದೆಂತು ನಿನ್ನ ?
ಚಂದನ , ಕುಂಕುಮವ ಪೂಸಿ
ಹಾರ ಕಿರೀಟವ ಹಾಕಿ
ಗಂಟೆಯ ನಾದದಿ ದೀಪವ ಬೆಳಗಿ
ಭಜನೆಯ ಮಾಡಿದರೆ ,
ತುಂಬೀತೇ ಜೀವ ಕಳೆ ?
ಹೇ ದೇವಾ ನೀನೆಲ್ಲಿರುವೆ ?
ಕೋಲಾಹಲವೆಬ್ಬಿಸುವ ಜಾತೀಯತೆ ದೇವದಾಸಿಯರ
ವ್ಯಥೆಯ ಕತೆ,
ಬಲಿಯಾಗುವ ಪಶುಗಳ ,
ವೇದನೆಯ ರೋದನೆಗೆ
ಕಿವಿಗೊಡದೆ ಮೂಕನಾಗಿ ನಿಂತಿರುವಿಯಾ ?
ಹೇ ದೇವಾ ನೀನೆಲ್ಲಿರುವೆ ?
ಎಲ್ಲಿರುವೇ ತಂದೆ , ಜಗದ್ರಕ್ಷಕ