ತೆರಳುವವನಿದ್ದೆನು ಇಂದು ಗೆಳೆಯರ ಸಂಗಡದೊಡನೆ ಬೆಳಗಾವಿಗೆ
ಪಕ್ಕದ ವಾಹನದಲ್ಲಿಯೇ ಆಸೀನಳಾಗಿದ್ದಳು ನನ್ನ ಕನಸಿನ ಮತ್ಸ್ಯಕನ್ಯೆ
ಆಗಿಯೇ ಹೋಯಿತು ಪ್ರೀತಿ! ಮೊದಲನೋಟದಲ್ಲೇ!!
ಕೈಯಲ್ಲಿಯೇ ಹೃದಯಾಕಾರ ರಚಿಸಿ ತೇಲಿಬಿಟ್ಟೆನು ನನ್ನ ಪ್ರೇಮದ ಹಡಗನ್ನು
ನೋಡಿಯೂ ನೋಡದಿದ್ದಂತ್ತಿದ್ದಳು ಆಕೆ, ಮುಳುಗಿ ಹೋದಂತೆನಿಸಿತು ನನ್ನ ಪ್ರೀತಿಯ ನೌಕೆ
ಜಿಗಿಸಿಯೇಬಿಟ್ಟಿತು ನನ್ನನು ಮನಸೆಂಬ ಕಪಿಯು ಇನ್ನೇನು ಚಲಿಸಬೇಕೆಂದಿದ್ದ ನಮ್ಮ ವಾಹನದಿಂದ
ನೋವಾದದ್ದು ಕಾಲಿಗಲ್ಲ, ಆ ವಾಹನದ ಮೇಲೆ ಕಣ್ಣು ಹಾಯಿಸಿದ ನನ್ನ ಮನಸ್ಸಿಗೆ
ಅದರ ಹಿಂದೆ ಬರೆದಿತ್ತು, ಇದು “ಅಖಿಲ ಕರ್ನಾಟಕ ಕುರುಡರ ಸಂಘ”
ಪ್ರೀತಿಯೇ ಕುರುಡಂತೆ! ಪ್ರೀತಿಸಿದವಳು ಕುರುಡಳಾದರೇನಂತೆ?
ಅಂಗವಿಕಲತೆ ಕೇವಲ ನೋಟಕ್ಕೆ, ಮನಸ್ಸಿಗಲ್ಲವಲ್ಲ!!
ಇಷ್ಟರಲ್ಲಿ, ಆಕೆಯಿದ್ದ ವಾಹನ ಶುರುವಾದ ಶಬ್ದ ನನ್ನ ಕಿವಿಯ ತಮಟೆಯನು ನಾಟಿತು
ಉಗುಳು ನುಂಗಿ, ಕರುಳು ಬಿಗಿದು, ಕೂಗಿ ಹೇಳಿಯೇ ಬಿಟ್ಟೆನು ನನ್ನ ಪ್ರೀತಿಯನ್ನು ಅವಳಿಗೆ
ಹಿಂದಿರುಗಿ ನಕ್ಕಳು ಆಕೆ!, ಸುತ್ತಲಿದ್ದ ಜನರು ನಕ್ಕರು!!
ಪ್ರೀತಿಯ ಅಮಲು ಇಳಿದು, ಹೃದಯ ಒಡೆದು, ಮರಳಿ ಏರಿದೆನು ನನ್ನ ವಾಹನವನ್ನು
ಚಲಿಸಲು ಶುರುವಾದ ನನ್ನ ವಾಹನದ ಹಿಂದೆ ಬರೆದಿತ್ತು, ಇದು “ಅಖಿಲ ಭಾರತ ಮೂಗರ ಸಂಘ”